ಡಾ. ಶಾಹ್ ಉಸ್ತಾದ್.


ಡಾ. ಶಾಹ್ ಉಸ್ತಾದ್.

✍️ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

ಡಾ. ಶಾಹ್ ಉಸ್ತಾದ್ ಎಲ್ಲರಿಗೂ ಚಿರಪರಿಚಿತ ನಾಮ. ಇಸ್ಲಾಮಿನ ವಿದ್ಯಾ ಪ್ರಪಂಚದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ, ವಿದ್ವಾಂಸರಿಗೆ ಅಪ್ರತಿಮ ಮಾದರಿ ವ್ಯಕ್ತಿಯಾಗಿ, ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯತೆಯನ್ನು ತೋರಿಸಿ, ಧಾರ್ಮಿಕ, ಸಾಹಿತ್ಯಿಕ, ಭಾಷಣ, ಬರಹ ರಂಗದಲ್ಲಿ ಮಿಂಚಿದ ಮೇರು ಪ್ರತಿಭೆಯಾಗಿದ್ದರು.
1935 ರಲ್ಲಿ ಡಾ.ಮಹ್ಮೂದ್ ಶಾಹ್ ಉಸ್ತಾದರ ಜನನ ಕುಂಬಳೆಯ ಕುಂಬೋಲಿನಲ್ಲಿ ಆಗಿತ್ತು. ತಂದೆಯ ಹೆಸರು ಹಾಜಿ ಅಬ್ದುಲ್ಲಾ ಮುಸ್ಲಿಯಾರ್. ತಾಯಿ ಆಸಿಯ ಬೀಬಿ. ಕುಂಬೋಲ್ ಪರಿಸರದ ಮಹಿಳೆಯರಿಗೆ ಇಸ್ಲಾಮಿಕ್ ತರಗತಿಗಳನ್ನು ನೀಡುತ್ತಿದ್ದ ತಾಯಿ ತನ್ನ ಆರನೇ ವಯಸ್ಸಿನಲ್ಲಿ ಮರಣ ಹೊಂದಿದರು. ತಾಯಿಯ ನಿಧನದ ಬಳಿಕ ತನ್ನ ಮಗನೊಂದಿಗೆ ಹಾಜಿ ಅಬ್ದುಲ್ಲಾ ಮುಸ್ಲಿಯಾರ್ ಪುತ್ತೂರು ತಾಲೂಕಿನ ಆತೂರಿಗೆ ಬಂದರು. ಆತೂರಿನಲ್ಲಿ ಡಾ.ಶಾಹ್ ಉಸ್ತಾದರ ಬಾಲ್ಯದ ಪಯಣ ಪ್ರಾರಂಭವಾಯಿತು. ಪ್ರಾಥಮಿಕ ಲೌಕಿಕ  ವಿದ್ಯಾಭ್ಯಾಸ ಆತೂರು ಕೊಯ್ಲಾ ಸರಕಾರಿ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ತಿಗೊಳಿಸಿದರು. ಧಾರ್ಮಿಕ ಪ್ರಾಥಮಿಕ ವಿದ್ಯಾಭ್ಯಾಸ ತನ್ನ ತಂದೆಯಿಂದಲೇ ಕರಗತ ಮಾಡಿದರು. ನಂತರ ವೈ ಅಬ್ದುರ್ರಹ್ಮಾನ್ ಪಯ್ಯಕ್ಕಿ ಉಸ್ತಾದರ ಶಿಷ್ಯತ್ವವನ್ನು ಸ್ವೀಕರಿಸಿ ದರ್ಸಿಗೆ ಸೇರಿದರು. ಶಾಹ್ ಉಸ್ತಾದರ ಹದಿನಾರನೇ ವಯಸ್ಸಿನಲ್ಲಿ ತನ್ನ ತಂದೆ ಹಾಜಿ ಅಬ್ದುಲ್ಲಾಹ್ ಮುಸ್ಲಿಯಾರ್ ಮರಣ ಹೊಂದಿದರು. ನಿಧನದ ಮುಂಚೆ ಹಾಜಿ ಅಬ್ದುಲ್ಲಾ ಮುಸ್ಲಿಯಾರ್ ರವರು ಆತೂರು ಜಮಾಅತ್ ಅಧ್ಯಕ್ಷರೂ, ದ.ಕ ಜಿಲ್ಲೆಯ ಬ್ಯಾರಿ ಸಮುದಾಯದ ಪ್ರಮುಖರೂ ಆಗಿದ್ದ ಅಲಿಯಾರ ಇಬ್ರಾಹಿಂ ಹಾಜಿಯವರೊಂದಿಗೆ ಮಾಡಿದ ವಸಿಯ್ಯತಿನಂತೆ ಡಾ.ಶಾಹ್ ಉಸ್ತಾದರನ್ನು ಪಾಲನೆ, ಪೋಷಣೆ ಮಾಡುವ ಜವಾಬ್ದಾರಿ ವಹಿಸಿ, ಉನ್ನತ ವ್ಯಾಸಂಗಕ್ಕಾಗಿ ತಲಿಪ್ಪರಂಬು ಖುವ್ವತುಲ್ ಇಸ್ಲಾಂ ಅರೆಬಿಕ್ ಕಾಲೇಜಿಗೆ ಸೇರಿಸಿದರು. ತಲಿಪ್ಪರಂಬುವಿನಲ್ಲಿ ಇಕೆ ಉಸ್ತಾದ್ ಹಾಗು ಬೇರೆ ಕೆಲವು ಉಸ್ತಾದರುಗಳ ಶಿಷ್ಯತ್ವವನ್ನು ಸ್ವೀಕರಿಸಿದರು. ಕಲಿಕೆಯ ಬಳಿಕ ಆತೂರು ಜುಮಾ ಮಸೀದಿಯಲ್ಲಿ ಹದಿನಾಲ್ಕು ವರ್ಷ ಸೇವೆ ಸಲ್ಲಿಸಿದರು. ಈ ಮಧ್ಯೆ ಅಲಿಯಾರ ಇಬ್ರಾಹಿಂ ಹಾಜಿಯವರು ತನ್ನ ಮಗಳಾದ ಹಲೀಮಮ್ಮಳನ್ನು ಡಾ.ಶಾಹ್ ಉಸ್ತಾದರಿಗೆ ವಿವಾಹ ಮಾಡಿ ಕೊಟ್ಟಿದ್ದರು. 1969 ರಲ್ಲಿ ಅಲಿಯಾರ ಇಬ್ರಾಹಿಂ ಹಾಜಿ ನಿಧನ ಹೊಂದಿದರು. ನಿಧನದಿಂದ ತೆರವಾದ ಆತೂರು ಜಮಾಅತಿನ ಸ್ಥಾನಕ್ಕೆ ಅಧ್ಯಕ್ಷರಾಗಿಯೂ, ಕಾರ್ಯದರ್ಶಿಯಾಗಿಯೂ ಜವಾಬ್ದಾರಿ ನಿಭಾಯಿಸಿದರು.
ಬಹು ಮುಖ ಪ್ರತಿಭೆಯಾಗಿದ್ದ ಡಾ.ಶಾಹ್ ಉಸ್ತಾದರು ಎರಡು ವರ್ಷಗಳ ಕಾಲ ಜವಳಿ ವ್ಯಾಪಾರ ನಡೆಸಿದರು. ಮೂರು ವರ್ಷಗಳ ಕಾಲ PWD ಕಾಂಟ್ರಾಕ್ಟರ್ ಆಗಿ ಕೆಲಸ ನಿರ್ವಹಿಸಿದರು. ಬಳಿಕ ಮೂರು ವರ್ಷ ಕೊಯ್ಲಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಬೆಂಗಳೂರಿನಲ್ಲಿ ಹೋಮಿಯೋಪಥಿ ಟ್ರೈನಿಂಗ್ ಪಡೆದು, 1964 ರಲ್ಲಿ ಪರೀಕ್ಷೆ ಬರೆದು ಪಾಸಾಗಿ ಹೋಮಿಯೋಪಥಿ ವೈದ್ಯರಾಗಿಯೂ ಜನ ಸೇವೆ ನಡೆಸಿ ಪ್ರಸಿದ್ಧಿ ಪಡೆದಿದ್ದರು. ಬೆಂಗಳೂರಿನಲ್ಲಿ ಹೋಮಿಯೋಪಥಿ ಕಲಿಯಲು ಅಲಿಯಾರ ಇಬ್ರಾಹಿಂ ಹಾಜಿ  ಪ್ರೋತ್ಸಾಹ, ಬೆಂಬಲ ನೀಡಿದ್ದರು. ರಾಮಾಯಣ, ಮಹಾಭಾರತ, ಬೈಬಲ್ ಸಹಿತ ವಿವಿಧ ಧರ್ಮಗಳ ಗ್ರಂಥಗಳನ್ನು ಅಧ್ಯಯನ ನಡೆಸಿದ್ದರು. ಅರೆಬಿಕ್, ಇಂಗ್ಲಿಷ್, ಕನ್ನಡ, ಮಲಯಾಲ, ಉರ್ದು, ಹಿಂದಿ, ಪಾರ್ಸಿ ಭಾಷೆಗಳಲ್ಲಿ ಅಪಾರ ಪ್ರಾವೀಣ್ಯತೆ ಪಡೆದಿದ್ದರಲ್ಲದೆ ಸಂಸ್ಕ್ರತ ಭಾಷೆಯಲ್ಲೂ ಸಾಮರ್ಥ್ಯ ಹೊಂದಿದ್ದರು. ತನ್ನಲ್ಲಿದ್ದ ಪುಸ್ತಕ ಭಂಡಾರ ಜನರನ್ನು ಆಶ್ಚರ್ಯ ಚಕಿತಗೊಳಿಸುತ್ತಿತ್ತು. ವಿವಿಧ ಭಾಷೆಗಳ ಪುಸ್ತಕಗಳು ಅವರ ಮಲಗುವ ಕೋಣೆಯಲ್ಲಿ ಹರಡಿಕೊಂಡಿದ್ದವು. ರಾತ್ರಿ ಕೊಂಚ ಸಮಯ ನಿದ್ರಿಸುತ್ತಿದ್ದ ಡಾ.ಶಾಹ್ ಉಸ್ತಾದರು ಹೆಚ್ಚಿನ ಪಾಲು ಆರಾಧನೆಗೂ, ಗ್ರಂಥ ಅಧ್ಯಯನಕ್ಕೂ, ಬರಹಕ್ಕೂ ಮೀಸಲಿರಿಸಿದ್ದರು. 1974 ರಲ್ಲಿ ಹಡಗು ಮುಖಾಂತರ ತನ್ನ ಗುರುವರ್ಯರಾದ ಪಯ್ಯಕ್ಕಿ ಉಸ್ತಾದರ ಜೊತೆ ಹಜ್ ನಿರ್ವಹಿಸಿದರು. ಇಸ್ಲಾಮೀ ಸಂಬಂಧವಾದ ಚರ್ಚೆಗಳು ಇದ್ದಲ್ಲಿ ಸ್ವತಃ ಪಯ್ಯಕ್ಕಿ ಉಸ್ತಾದರು ಅಂಚೆ ಮೂಲಕ ಪತ್ರ ಬರೆದು ಶಾಹ್ ಉಸ್ತಾದರನ್ನು ತನ್ನ ಬಳಿ ಕರೆದು ಪರಿಹಾರೋಪಾಯವನ್ನು ಕಾಣುತ್ತಿದ್ದರು. ಹಜ್ ನಿರ್ವಹಿಸಿ ಮರಳಿದ ಶಾಹ್ ಉಸ್ತಾದರು ಆರಂತೋಡಿನಲ್ಲಿ ಸೇವೆ ಸಲ್ಲಿಸಿದರು. ಸುದೀರ್ಘ ಮೂವತ್ತ ನಾಲ್ಕು ವರ್ಷಗಳ ಕಾಲ ಆರಂತೋಡಿನಲ್ಲಿ ಮುದರ್ರಿಸ್, ಖತೀಬರಾಗಿ ಸೇವೆ ಸಲ್ಲಿಸಿದ ಶಾಹ್ ಉಸ್ತಾದರು ಇಮಾಮತ್ ನಿಲ್ಲಲು ಅಸಾಧ್ಯವಾದ ಹಂತ ತಲುಪಿದಾಗ ಸೇವೆಯಿಂದ ವಿರಮಿಸಿದರು. 
ಡಾ.ಶಾಹ್ ಉಸ್ತಾದ್ ರವರ ಪತ್ನಿ ಹಲೀಮಮ್ಮ ರವರ ತಂದೆ ಅಲಿಯಾರ ಇಬ್ರಾಹಿಂ ಹಾಜಿಯವರೂ ಕೂಡಾ ದ.ಕ ಜಿಲ್ಲೆಯ  ಬ್ಯಾರಿ ಸಮುದಾಯದ ಪ್ರಮುಖರೂ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ಆದ ಕೊಡುಗೆ ನೀಡಿದವರೂ ಆಗಿದ್ದರು. ಉಳ್ಳಾಲದ ಮಾಜಿ ಶಾಸಕರೂ, ಖ್ಯಾತ ಕವಿಯೂ ಆಗಿದ್ದ ಬಿ. ಎಂ ಇದ್ದಿನಬ್ಬ ರವರು ದ.ಕ ಜಿಲ್ಲೆಯ ಪ್ರಗಲ್ಭ ಬ್ಯಾರಿ ಮುಸ್ಲಿಮರ ಕುರಿತು ಬರೆದ ಪುಸ್ತಕದಲ್ಲಿ ಅಲಿಯಾರ ಇಬ್ರಾಹಿಂ ಹಾಜಿ ಸ್ಥಾನ ಪಡೆದಿದ್ದರು. ದ.ಕ ಜಿಲ್ಲೆಯಲ್ಲಿ ಅಲಿಯಾರ ಇಬ್ರಾಹಿಂ ಹಾಜಿಯವರಂತಹ ಹತ್ತು ಮಂದಿ ಇದ್ದಿದ್ದರೆ ಮುಸ್ಲಿಂ ಸಮುದಾಯ ಸದಾ ಮುಂದೆ ಇರುತ್ತಿತ್ತು ಎಂದು ಬಿ. ಎಂ ಇದ್ದಿನಬ್ಬ ರವರು ಶಾಹ್ ಮುಸ್ಲಿಯಾರ್ ರವರ ಮಗನಲ್ಲಿ ಹೇಳಿದ್ದರು.
ಡಾ.ಶಾಹ್ ಉಸ್ತಾದರಿಗೆ ಅಬ್ದುಲ್ಲಾ ಬಶೀರ್ ಶಾಹ್ ಎಂಬ ಓರ್ವ ಪುತ್ರ ಹಾಗು ಆಸಿಯ ರಹ್ಮತ್, ಸಲಾಮತ್, ಬರಕತ್, ರೈಹಾನತ್, ಝೀನತ್, ತ್ವಾಹಿರ ಎಂಬ ಆರು ಪುತ್ರಿಯರಿದ್ದರು.
ಧಾರ್ಮಿಕ ಮಾತ್ರವಲ್ಲದೆ ಶೈಕ್ಷಣಿಕ, ಸಾಮಾಜಿಕ, ಸಾಮುದಾಯಿಕ  ಕ್ಷೇತ್ರಗಳಲ್ಲಿ ಡಾ. ಶಾಹ್ ಉಸ್ತಾದ್ ಮಿಂಚಿದ್ದರು. ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದು ದೊಡ್ಡ ಅಪರಾಧವೆಂಬಂತೆ ಕಾಣುತ್ತಿದ್ದ ಆ ಕಾಲದಲ್ಲಿ ಸ್ತ್ರೀ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟರು. ತನ್ನ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಿ ಜನರ ಮನಃದಲ್ಲಿದ್ದ ತಪ್ಪುಧಾರಣೆಯನ್ನು ಹೋಗಲಾಡಿಸಿ, ಇತರರ ಹೆಣ್ಣು ಮಕ್ಕಳು ಶಾಲಾ ಶಿಕ್ಷಣ ಪಡೆಯಲು ಮಾದರಿಯಾದರು.
ಡಾ. ಶಾಹ್ ಉಸ್ತಾದರ ತಂದೆ ಹಾಜಿ ಅಬ್ದುಲ್ಲಾ ಮುಸ್ಲಿಯಾರ್ ಆತೂರು ಹಾಗು ಸುತ್ತ ಮುತ್ತ ಮೊಹಲ್ಲಾಗಳ ಖಾಝಿಯಾಗಿದ್ದರು. 
1978 ರಲ್ಲಿ ಇ.ಕೆ ಹಸನ್ ಮುಸ್ಲಿಯಾರ್ ರವರ ನೇತ್ರತ್ವದಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾದ ಕರ್ನಾಟಕ ಜಂಇಯ್ಯತುಲ್ ಉಲಮಾ ಇದರ ಕಾರ್ಯದರ್ಶಿಯಾಗಿಯೂ, ಜಂಇಯ್ಯತುಲ್ ಉಲಮಾ ಹೊರ ತಂದ ಸತ್ಯವಾಣಿ ಎಂಬ ಮಾಸಿಕದ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸರಳ ಪಥ, ಆಲಮುಲ್ ಹುದಾ ಮಾಸಿಕವನ್ನು ಹಲವು ವರ್ಷಗಳ ಕಾಲ ಮುನ್ನಡೆಸಿದ್ದರು. ಸುನ್ನೀ ಗೈಡನ್ಸ್ ಬ್ಯೂರೋ ಚೆಯರ್ಮಾನ್ ಆಗಿ ಕೆಲಸ ಮಾಡಿದ್ದರು. ಡಾ.ಶಾಹ್ ಉಸ್ತಾದ್ ರವರ ಅರೆಬಿಕ್, ಇಂಗ್ಲೀಷ್, ಕನ್ನಡ ಭಾಷೆಯ ಕೈ ಬರಹ ಜನಮನ ಸೆಳೆಯುವ ರೀತಿಯಲ್ಲಿ ಅದ್ಭುತವಾಗಿತ್ತು. ಕೈ ಬರಹ ವೀಕ್ಷಣೆಗಾಗಿಯೇ ಜನರು ಅವರ ಬಳಿ ಬರುತ್ತಿದ್ದರು. ಭಾಷಣದಲ್ಲಿ ಅವರನ್ನು ಮೀರಿಸುವ ಬೇರೊಬ್ಬರು ಆ ಕಾಲದಲ್ಲಿರಲಿಲ್ಲ. ಕನ್ನಡ, ಬ್ಯಾರಿ, ಮಲಯಾಳ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಉತ್ತಮ ವಾಕ್ಚಾತುರ್ಯ ಅವರಲ್ಲಿತ್ತು. ಆಳವಾದ ಜ್ಞಾನ ಅವರ ಭಾಷಣದಿಂದ ಸಭಿಕರಿಗೆ ಸಿಗುತ್ತಿತ್ತು.
ಮದರಂಗಿ ಸಾಹಿತ್ಯ ಬಳಗ ಮುಸ್ಲಿಂ ಸಾಹಿತಿಗಳಲ್ಲೊಬ್ಬರಿಗೆ ಪ್ರತೀ ವರ್ಷ ಮದರಂಗಿ ಸಾಹಿತ್ಯ ಪ್ರಶಸ್ತಿ ನೀಡುವುದೆಂದು ತೀರ್ಮಾನಿಸಿ, ಅದರ ಪ್ರಥಮ ಮದರಂಗಿ ಸಾಹಿತ್ಯ ಪ್ರಶಸ್ತಿ ಡಾ. ಶಾಹ್ ಉಸ್ತಾದರಿಗೆ ಒಲಿದು ಬಂದಿತ್ತು.  ದುಬೈಯಲ್ಲಿರುವ ಮೂಳೂರು ಇಹ್ಸಾನ್ ಸುನ್ನೀ ಸೆಂಟರ್ ಹಾಗು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಂಘವು ಇವರ ಪ್ರತಿಭೆಯನ್ನು ಗುರುತಿಸಿ ಸನ್ಮಾನ ಪುರಸ್ಕಾರ ಮಾಡಿದ್ದರು. 
ಎಲ್ಲಾ ಜಾತಿ, ಧರ್ಮಗಳ ಜನರು ಡಾ.ಶಾಹ್ ಉಸ್ತಾದರನ್ನು ಗೌರವಿಸುತ್ತಿದ್ದರು. ಸೌಹಾರ್ದತೆ, ತಾಳ್ಮೆ, ಪ್ರೀತಿ ತುಂಬಿದ ಬದುಕು ಇದಕ್ಕೆ ಕಾರಣವಾಗಿತ್ತು.
ಚೇರಮಾನ್ ಪೆರುಮಾಳ್ ರಾಜರ ಕುಟುಂಬ ಪರಂಪರೆಯಲ್ಲಿ ಶಾಹ್ ಉಸ್ತಾದರು ಜನಿಸಿದ್ದರು. ಸ್ವತಃ ತನ್ನ ಪುತ್ರನಲ್ಲಿ ಈ ವಿಷಯ ತಿಳಿಸಿದ್ದರು. 2008 ರಲ್ಲಿ ಎರಡನೇ ಬಾರಿ ತನ್ನ ಪತ್ನಿ ಹಲೀಮಮ್ಮ, ರೈಹಾನತ್ ಎಂಬ ಮಗಳು, ಅಳಿಯನಾದ ಅಬ್ದುಲ್ಲಾ ಶರೀಫ್ ಪಟೇಲ್ ರವರೊಂದಿಗೆ ಹಜ್ ನಿರ್ವಹಿಸಿದರು.
ಶಾಹ್ ಉಸ್ತಾದರ ಪ್ರಿಯ ಪತ್ನಿ ಹಲೀಮಮ್ಮ 2013 ರಲ್ಲಿ ಮರಣ ಹೊಂದಿದರು. ಡಾ.ಶಾಹ್ ಉಸ್ತಾದ್ ಎಂಬ ದಿವ್ಯ ಜ್ಯೋತಿಯು 2019 ಮೇ 29 ರಂದು ಅಸ್ತಂಗತವಾಯಿತು.


 

Comments

Popular posts from this blog

ಸ್ವಾಗತ ಸಮಿತಿ

ಮಕ್ಕಳ ವರ್ತನೆ

ಯುಟಿಕೆ