ಟಿ ಎಚ್ ಇಬ್ರಾಹಿಂ ಮದನಿ
ಟಿ ಎಚ್ ಇಬ್ರಾಹಿಂ ಮದನಿ
ಸಂಗ್ರಹ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ.
ಬ್ಯಾರಿ ಭಾಷೆಯಲ್ಲಿ ನಿರರ್ಗಳವಾಗಿ ಇಸ್ಲಾಮಿನ ಸುಂದರ ಆಶಯಾದರ್ಶಗಳ ಕುರಿತು ಮಾತನಾಡಬಲ್ಲ ಸಾಮರ್ಥ್ಯ ಹೊಂದಿದವರಾಗಿದ್ದರು ಟಿ ಎಚ್ ಇಬ್ರಾಹಿಂ ಮದನಿ. ಒಂದು ಕಾಲದಲ್ಲಿ ಬಹು ಬೇಡಿಕೆಯ ವಾಗ್ಮಿಯೂ, ದ.ಕ ಹಾಗು ಉಡುಪಿ ಭಾಗದ ಜನರ ಮನೆ ಮಾತಾಗಿದ್ದರು.
ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಹೆಗಡೆ ಹಿತ್ತಿಲು ನಿವಾಸಿಗಳಾದ ಅಬೂಬಕರ್ ಹಾಗು ಹವ್ವಮ್ಮ ದಂಪತಿಗಳ ಸುಪುತ್ರನಾಗಿ 1949 ರ ಮೇ - 10 ರಂದು ಜನಿಸಿದರು. 9 ನೇ ತರಗತಿಯವರೆಗೆ ಲೌಕಿಕ ಶಿಕ್ಷಣ ಪಡೆದಿದ್ದರು. ಧಾರ್ಮಿಕವಾಗಿ ಪ್ರತಿಷ್ಠಿತ ಉಳ್ಳಾಲ ಸಯ್ಯಿದ್ ಮದನಿ ಅರೆಬಿಕ್ ಶರೀಅತ್ ಕಾಲೇಜಿನಲ್ಲಿ ವಿದ್ಯಾರ್ಜನೆಗೈದು 1977 ರಲ್ಲಿ ಮದನಿ ಬಿರುದು ಪಡೆದರು. ತಾಜುಲ್ ಉಲಮಾ ಖ.ಸಿ ರವರ ನಿರ್ದೇಶನದಂತೆ, ಅವರ ಆಶೀರ್ವಾದ ಪಡೆದು ಕುಂಬೋಲ್ ನಲ್ಲಿ ಎರಡು ವರ್ಷ, ಉಜಿರೆಯಲ್ಲಿ 9 ವರ್ಷ, ಸುಳ್ಯದಲ್ಲಿ 9 ವರ್ಷ, ಉಚ್ಚಿಲ ಅರಿಕ್ಕಾಡಿಯಲ್ಲಿ 2 ವರ್ಷ ಹಾಗು ಮಂಜನಾಡಿಯಲ್ಲಿ 9 ವರ್ಷ ಮುದರ್ರಿಸ್ ಹಾಗು ಖತೀಬರಾಗಿ ಸೇವೆ ಸಲ್ಲಿಸಿದರು.
ಪತ್ನಿಯ ಹೆಸರು ಬೀಫಾತಿಮ, ಅತಾವುಲ್ಲ, ಯಹ್ಯಾ, ಬಾಸಿತ್ ಸಖಾಫಿ, ತ್ವಾಹಿರ್, ಜಲೀಲ್, ಜುನೈದ್ ಎಂಬ ಆರು ಗಂಡು ಮಕ್ಕಳು ಹಾಗು ಹಬೀಬಃ, ನಸೀಬಃ, ಹನ್ನತ್ ಆಯಿಶಾ ಎಂಬ ನಾಲ್ಕು ಹೆಣ್ಣು ಮಕ್ಕಳು. ಕರ್ನಾಟಕ ಕರಾವಳಿ ಭಾಗದ ಅತ್ಯುತ್ತಮ ಭಾಷಣಗಾರರಾಗಿದ್ದರು. ಬ್ಯಾರಿ ಸಾಹಿತ್ಯ ಲೋಕಕ್ಕೆ ತನ್ನ ವಾಕ್ಚಾತುರ್ಯವನ್ನು ಮೀಸಲಿರಿಸಿ ತನ್ನದೇ ಆದ ಛಾಪು ಮೂಡಿಸಿದ್ದರು. ಬ್ಯಾರಿ ಭಾಷಣದ ಮೂಲಕ ಇಸ್ಲಾಮಿನ ನೈಜ ಆಶಯಾದರ್ಶಗಳನ್ನು ಮುಸಲ್ಮಾನರೆಡೆಯಲ್ಲಿ ಬಿತ್ತಿ ಜನಮಾನಸದಲ್ಲಿ ಇಂದಿಗೂ ಅಮರರಾಗಿದ್ದಾರೆ. ಟಿ.ಎಚ್ ಉಸ್ತಾದ್ ಎಂಬ ಚುಟುಕು ಹೆಸರಿನಲ್ಲಿ ಪ್ರಸಿದ್ಧಿ ಪಡೆದಿರುವ ಇಬ್ರಾಹಿಂ ಮದನಿ ಉಸ್ತಾದ್ ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿಯಾಗಿಯೂ, ಸುನ್ನೀ ಸಂಘ ಸಂಸ್ಥೆಗಳ ಮುಂಚೂಣಿ ನಾಯಕರೂ, ನೂರಾರು ಮೊಹಲ್ಲಾಗಳ ಅಧ್ಯಕ್ಷ, ಗೌರವಾಧ್ಯಕ್ಷ ಹುದ್ದೆಗಳನ್ನು ನಿಭಾಯಿಸುತ್ತಿದ್ದರು. ಎಂತಹ ಜಟಿಲ ಸಮಸ್ಯೆಗಳನ್ನು ಸುಲಲಿತವಾಗಿ ಪರಿಹರಿಸುತ್ತಿದ್ದ ಉಸ್ತಾದರು ಬಡ ಅನಾಥ, ನಿರ್ಗತಿಕರ ಇಹಪರ ವಿಜಯವನ್ನು ಗುರಿಯಾಗಿಸಿ ಉಳ್ಳಾಲದ ಖಾಝಿಯಾಗಿದ್ದ ತಾಜುಲ್ ಉಲಮಾ ಖ.ಸಿ ರವರ ಆಶೀರ್ವಾದದೊಂದಿಗೆ 2006 ರಲ್ಲಿ ತನ್ನದೇ ಊರಿನಲ್ಲಿ ಅಲ್ ಮದೀನತುಲ್ ಮುನವ್ವರಃ ಎಂಬ ಧಾರ್ಮಿಕ, ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಯನ್ನು ಊರ ಹಾಗು ಅನಿವಾಸಿ ವಿದೇಶಿಗರ ಸಹಾಯದೊಂದಿಗೆ ಪ್ರಾರಂಭಿಸಿದರು. ಸಂಸ್ಥೆಯು ಯಶಸ್ವಿಯಾಗಿ ಕಾರ್ಯಾಚರಿಸುತಿದೆ. ಅಪಾರ ಶಿಷ್ಯ ವ್ರಂದವನ್ನು ಹೊಂದಿದ ಉಸ್ತಾದರು 2008 ಜೂನ್ 26 ರಂದು ಅಸ್ತಂಗತರಾದರು.

Comments
Post a Comment