ಯು ಕೆ ಇಬ್ರಾಹಿಂ ಹಾಜಿ ಉಳ್ಳಾಲ
ಯು ಕೆ ಇಬ್ರಾಹಿಂ ಹಾಜಿ ಉಳ್ಳಾಲ
✍️ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ.
ಉಳ್ಳಾಲದ ಯು ಕೆ ಇಬ್ರಾಹಿಂ ಹಾಜಿಯವರನ್ನು ತಿಳಿಯದವರು ವಿರಳ. ಸುದೀರ್ಘ 35 ವರ್ಷಗಳ ಕಾಲ ಸಯ್ಯಿದ್ ಮದನಿ ಉಳ್ಳಾಲ ದರ್ಗಾ ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 1929 ರಲ್ಲಿ ಶೇಕಾಕ ಮತ್ತು ಪುತ್ತುಮ್ಮ (ನಫೀಸ) ದಂಪತಿಗಳ ಸುಪುತ್ರನಾಗಿ ಉಳ್ಳಾಲದ ಕೋಟೆಪುರದಲ್ಲಿ ಜನಿಸಿದರು. ತೀರಾ ಬಡ ಕುಟುಂಬವಾಗಿತ್ತು ಅವರದು. ಗೋಣಿ ಚೀಲ ವ್ಯವಹಾರದ ಮೂಲಕ ತಮ್ಮ ವ್ರತ್ತಿ ಜೀವನವನ್ನು ಆರಂಭಿಸಿದ ಯುಕೆ ಇಬ್ರಾಹಿಂ ಹಾಜಿಯವರು ಬಡವರ ಶಿಕ್ಷಣದ ಉನ್ನತಿಗಾಗಿ ಒತ್ತುಕೊಟ್ಟರು. ಉಳ್ಳಾಲದ ಬಡ ಜನರು ಶಿಕ್ಷಣದಿಂದ ವಂಚಿತರಾಗಬಾರದು. ಇತರ ಪ್ರದೇಶದ ವಿದ್ಯಾವಂತರೆದುರು ತಮ್ಮೂರಿನ ಜನರು ಕೀಳಾಗಬಾರದು ಎಂಬ ದೂರದ್ರಷ್ಟಿ ಅವರಲ್ಲಿತ್ತು. ವಿಶಾಲ ಮನಸ್ಸಿನ ವ್ಯಕ್ತಿತ್ವದ ಒಡೆಯರಾಗಿದ್ದರು. ಅವರ ಮಾತಿನಲ್ಲಿ ತಂತ್ರಗಾರಿಕೆ, ನಡವಳಿಕೆಯಲ್ಲಿ ಗಾಂಭೀರ್ಯತೆ ಇತ್ತು. ಅವರು ಎಲ್ಲಾ ಜಾತಿ, ಧರ್ಮಗಳ ಜನತೆಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಅವರ ಸ್ನೇಹ ತುಂಬಿದ ಸ್ವಭಾವದಿಂದಲೇ ಎಲ್ಲರೂ ಅವರನ್ನು ಇಷ್ಟಪಡುತ್ತಿದ್ದರು ಮತ್ತು ಗೌರವಿಸುತ್ತಿದ್ದರು. ಸಾಮುದಾಯಿಕ ಮತ್ತು ಸಾಮಾಜಿಕ ಸೇವೆಯ ಮೂಲಕ ಜನಮನ್ನಣೆ ಪಡೆದ ಪ್ರಾರಂಭ ಹಂತದಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರಾದರು. ಬಳಿಕ ಸಯ್ಯಿದ್ ಮದನಿ ಉಳ್ಳಾಲ ಜಮಾತಿನ ಸಮಿತಿ ಸದಸ್ಯರಾದರು. 1973 ರಲ್ಲಿ ಸಯ್ಯಿದ್ ಮದನಿ ಉಳ್ಳಾಲ ದರ್ಗಾ ಇದರ ಅಧ್ಯಕ್ಷರಾಗಿ ಪ್ರತಿಷ್ಠಿತ ಹುದ್ದೆಗೆ ಆಯ್ಕೆಯಾದರು. ಐದು ವರ್ಷಗಳಿಗೊಮ್ಮೆ ಸಯ್ಯಿದ್ ಮದನಿ ದರ್ಗಾ ಇದರ ಅಧ್ಯಕ್ಷಗಾದಿಗೆ ನಡೆಯುವ ಚುನಾವಣೆಯಲ್ಲಿ ಸತತ ಏಳು ಬಾರಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿ ತನ್ನ ಮರಣದವರೆಗೆ ಸತತ 34 ವರ್ಷಗಳ ಕಾಲ ಅಧಿಕಾರ ನಡೆಸಿದ್ದರು. 1982 ರಿಂದ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್, 1986 ರಿಂದ ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನಲ್ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷರಾಗಿ ಮುಂದುವರಿದಿದ್ದರು. ಅಲ್ಲದೆ ಸಯ್ಯಿದ್ ಮದನಿ ವಿವಿಧೋದ್ದೇಶ ಸಹಕಾರ ಸೊಸೈಟಿ ಇದರ ಅಧ್ಯಕ್ಷರಾಗಿದ್ದರು. ಉಳ್ಳಾಲ ಕ್ಷೇತ್ರದ ಕೋಮು ಸೌಹಾರ್ದತೆಯನ್ನು ಎತ್ತಿ ಹಿಡಿಯಲು 1973 ರಲ್ಲಿ ಸ್ಥಾಪಿತವಾದ ಉಳ್ಳಾಲ ಶಾಂತಿ ಸಮಿತಿಯ ಅಧ್ಯಕ್ಷರಾಗಿಯೂ, 1994 ರಿಂದ ಕರ್ನಾಟಕ ರಾಜ್ಯ ಹಜ್ ಸಮಿತಿಯ ಸದಸ್ಯರಾಗಿಯೂ, ದ.ಕ ಜಿಲ್ಲಾ ವಖ್ಫ್ ಸದಸ್ಯರಾಗಿಯೂ ಕರ್ತವ್ಯ ನಿಭಾಯಿಸಿದ್ದರು.
ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನಲ್ ಟ್ರಸ್ಟ್ ನ ಅಧೀನದಲ್ಲಿ ಅಂದು 25 ಕ್ಕಿಂತಲೂ ಹೆಚ್ಚು ಮಸೀದಿಗಳು, 30 ಕ್ಕಿಂತಲೂ ಹೆಚ್ಚು ಮದ್ರಸಗಳು ಹಾಗು ಸಯ್ಯಿದ್ ಮದನಿ ಅರೆಬಿಕ್ ಶರೀಅತ್ ಕಾಲೇಜು ಮತ್ತು ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ವಿಮೆನ್ಸ್ ಕಾಲೇಜು, 1 ಡಿಗ್ರಿ ಕಾಲೇಜು, 1 ಐಟಿಐ ಸಹಿತ ಕನ್ನಡ, ಉರ್ದು ಇಂಗ್ಲಿಷ್ ಮಾಧ್ಯಮಗಳಲ್ಲಿ ಪ್ರೈಮರಿ ಹಾಗು ಹೈಸ್ಕೂಲ್ ಶಾಲೆಗಳನ್ನೊಳಗೊಂಡು ಹಲವು ಸಂಸ್ಥೆಗಳು ಯು.ಕೆ ಇಬ್ರಾಹಿಂ ಹಾಜಿಯವರ ನೇತ್ರತ್ವದಲ್ಲಿ ಅಂದಿನ ಉಳ್ಳಾಲ ಖಾಝಿಯೂ, ಸಯ್ಯಿದ್ ಮದನಿ ಅರೆಬಿಕ್ ಶರೀಅತ್ ಕಾಲೇಜು ಪ್ರಾಂಶುಪಾಲರೂ ಆಗಿದ್ದ ತಾಜುಲ್ ಉಲಮಾ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಉಳ್ಳಾಲ ತಂಗಲ್ ರವರ ಆಶೀರ್ವಾದದಲ್ಲಿ ನಡೆದು ಬರುತ್ತಿತ್ತು. ಅಧರ್ಮ, ಅರಾಜಕತೆ, ಅನೀತಿ, ಅಜ್ಞಾನದ ಇರುಳನ್ನು ತೊಲಗಿಸಿ ನ್ಯಾಯ-ನೀತಿ, ಸುಜ್ಞಾನದ ಪ್ರಭೆಯನ್ನು ಹರಡಿ ಇಸ್ಲಾಮಿನ ಸುಂದರಾಶಯಾದರ್ಶಗಳನ್ನು ಪಸರಿಸಿ, ಸರ್ವ ಧರ್ಮೀಯರ ಮಧ್ಯೆ ಶಾಂತಿ ಸೌಹಾರ್ದತೆಯನ್ನು ನೆಲೆ ನಿಲ್ಲಿಸಿ ಉಳ್ಳಾಲವನ್ನು ಬೆಳಗಿಸಿದ ಹಿರಿಯ ಸಾಮಾಜಿಕ, ಶೈಕ್ಷಣಿಕ ಕ್ರಾಂತಿಯ ಹರಿಕಾರರೂ, ಶಾಂತಿ ಸೌಹಾರ್ದತೆಯ ಪ್ರತಿಪಾದಕರಾಗಿ ಜನಮಾನಸದಲ್ಲಿ ಅಮರರಾದರು.
ಸನ್ಮಾನ ಹಾಗು ಪುರಸ್ಕಾರಗಳು.
ಯು.ಕೆ ಇಬ್ರಾಹಿಂ ಹಾಜಿಯವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ 1996 ರ ಗಣರಾಜ್ಯೋತ್ಸವ ದಿನದಂದು ಜಿಲ್ಲೆಯ ಉಪ ಆಯುಕ್ತರು ಅವರನ್ನು ಸನ್ಮಾನಿಸಿ, ಪುರಸ್ಕರಿಸಲಾಯಿತು. ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಬೆಂಗಳೂರು 1997 ರ ಮೀಲಾದುನ್ನಬಿ ಮುನ್ನಾ ದಿನದಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. 1999 ರಲ್ಲಿ ಕೋಟೆಕಾರ್ ಕೊಲ್ಯದ ರಾಮಾನಂದ ಆಶ್ರಮದ ಟ್ರಸ್ಟ್ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾನವೀಯತೆಗಾಗಿ ಮಾಡಿದ ಅಪಾರ ಸೇವೆಗಳನ್ನು ಗುರುತಿಸಿ "ಧರ್ಮ ಸೇವಾ ರತ್ನ" ಬಿರುದನ್ನು ನೀಡಲಾಯಿತು. ಹೀಗೆ ಅವರ ಸಾಮಾಜಿಕ, ಶೈಕ್ಷಣಿಕ, ಮಾನವೀಯ ಸೇವೆಗಳನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳಿಂದ ಅಪಾರ ಪ್ರಶಸ್ತಿ, ಬಿರುದುಗಳನ್ನು ತನ್ನದಾಗಿಸಿದ್ದರು.
2007 ಅಕ್ಟೋಬರ್ 7 ರಂದು ಯು.ಕೆ ಇಬ್ರಾಹಿಂ ಹಾಜಿಯವರು ಉಳ್ಳಾಲ ಕೋಟೆಪುರದ ತಮ್ಮ ನಿವಾಸದಲ್ಲಿ ಅಸ್ತಂಗತರಾದರು.

Comments
Post a Comment